IPL 2026 ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೊನೆಗೂ ಗೆಲುವಿನ ನಗೆ ಬೀರಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಅವರ ಸ್ಫೋಟಕ ಅರ್ಧಶತಕ ಮತ್ತು ಮೊಹಮ್ಮದ್ ಶಮಿ ಅವರ ಶ್ರೇಷ್ಠ ಬೌಲಿಂಗ್ ನೆರವಿನಿಂದ ಲಕ್ನೋ ತಂಡ 5 ವಿಕೆಟ್ಗಳ ಜಯ ದಾಖಲಿಸಿದೆ.
157 ರನ್ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡಕ್ಕೆ ಆರಂಭದಲ್ಲೇ ಏಡನ್ ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 37 ರನ್ ಸೇರಿಸಿತು. ಆದರೆ ಮಿಚೆಲ್ ಮಾರ್ಷ್ 14 ರನ್ಗೆ ಔಟ್ ಆದರು. ನಂತರ ಮಾರ್ಕ್ರಾಮ್ ಮತ್ತು ಪಂತ್ ಜೋಡಿ ತಂಡವನ್ನು ಸ್ಥಿರಗೊಳಿಸಿತು.
ಮಾರ್ಕ್ರಾಮ್ ಕೇವಲ 31 ಎಸೆತಗಳಲ್ಲಿ 45 ರನ್ ಬಾರಿಸಿ ಔಟ್ ಆದರೂ, ನಾಯಕ ರಿಷಭ್ ಪಂತ್ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಅವರು ಜವಾಬ್ದಾರಿಯುತವಾಗಿ ಬ್ಯಾಟ್ ಮಾಡಿ ಅರ್ಧಶತಕ ಬಾರಿಸಿದರು. ಪಂತ್ 50 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ ಅಜೇಯ 68 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದೋನಿ, ನಿಕೋಲಸ್ ಪೂರನ್ ಮತ್ತು ಅಬ್ದುಲ್ ಸಮದ್ ಹೆಚ್ಚಿನ ಕೊಡುಗೆ ನೀಡದಿದ್ದರೂ, ಪಂತ್ ಅವರ ಧೈರ್ಯಶಾಲಿ ಇನ್ನಿಂಗ್ಸ್ ಲಕ್ನೋಗೆ ಬಲವಾಯಿತು.
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಭಾರೀ ಆಘಾತ ಎದುರಾಯಿತು. ಆರಂಭಿಕರಾದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಬೇಗನೆ ಔಟ್ ಆಗಿ ತಂಡ ಸಂಕಷ್ಟಕ್ಕೆ ಸಿಲುಕಿತು. ಕೇವಲ 11 ರನ್ಗೆ 3 ವಿಕೆಟ್ ಕಳೆದುಕೊಂಡ ಸನ್ ತಂಡಕ್ಕೆ ಲಿಯಾಮ್ ಲಿವಿಂಗ್ಸ್ಟೋನ್ ಸ್ವಲ್ಪ ನೆರವಾದರು.
ಆದರೆ ಪಂದ್ಯವನ್ನು ತಿರುಗಿಸಿದದ್ದು ನಿತೀಶ್ ಕುಮಾರ್ ರೆಡ್ಡಿ ಮತ್ತು ಹೆನ್ರಿಕ್ ಕ್ಲಾಸೆನ್ ಜೋಡಿ. ಈ ಜೋಡಿ ಐದನೇ ವಿಕೆಟ್ಗೆ ಶತಕದ ಜೊತೆಯಾಟ ನೀಡಿ ತಂಡವನ್ನು ಹೋರಾಟಕ್ಕೆ ತಂದು ನಿಲ್ಲಿಸಿತು. ರೆಡ್ಡಿ 56 ರನ್ ಮತ್ತು ಕ್ಲಾಸೆನ್ 62 ರನ್ ಬಾರಿಸಿ ತಂಡದ ಮೊತ್ತವನ್ನು 156 ರನ್ಗಳಿಗೆ ತಲುಪಿಸಿದರು.
ಬೌಲಿಂಗ್ನಲ್ಲಿ ಲಕ್ನೋ ಪರ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದರು. ಪವರ್ಪ್ಲೇನಲ್ಲಿ ಎರಡು ವಿಕೆಟ್ ಪಡೆದು ಎದುರಾಳಿ ತಂಡವನ್ನು ಆರಂಭದಲ್ಲೇ ಒತ್ತಡಕ್ಕೆ ತಳ್ಳಿದರು. ಶಮಿ ಜೊತೆಗೆ ಪ್ರಿನ್ಸ್ ಯಾದವ್ ಮತ್ತು ಆವೀಶ್ ಖಾನ್ ಕೂಡ ತಲಾ 2 ವಿಕೆಟ್ ಪಡೆದು ಗೆಲುವಿಗೆ ಸಹಕಾರ ನೀಡಿದರು.
ಈ ಜಯದೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ IPL 2026 ಟೂರ್ನಿಯಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿದೆ. ನಾಯಕ ಪಂತ್ ಅವರ ಫಾರ್ಮ್ ಮತ್ತು ಶಮಿ ಅವರ ಬೌಲಿಂಗ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.